ನೀಲಕಂಠಾರಾಧ್ಯ
	ಸು. 1500. ವೀರಶೈವಕವಿ. ಪರವಾದಿ ಗಜಾಂಕುಶ, ತಾರಾವಳಿಯ ಕರ್ತೃ. ಕೆರೆಯ ಪದ್ಮರಸ, ಕುಮಾರ ಪದ್ಮರಸರ ಕಾವ್ಯಮಾರ್ಗದಲ್ಲಿ ನಡೆದು ಶಿವಾದ್ವೈತ ಸಾಕಾರ ಸಿದ್ಧಾಂತವನ್ನು ಪ್ರತಿಪಾದಿಸುದಕ್ಕೆ ತೊಡಗಿ ಅದರ ಸ್ಥಿರೀಕರಣಕ್ಕಾಗಿ ಪರಮತ ನಿರಾಕರಣೆಯನ್ನು ಸಾಧಾರಪೂರ್ವಕವಾಗಿ ಮಾಡಿದ್ದಾನೆ. ಇದಕ್ಕಾಗಿ ವೇದಾಗಮ, ಪುರಾಣೇತಿಹಾಸಗಳನ್ನು ಆಧರಿಸಿದ್ದಾನೆ. ಗ್ರಂಥದಲ್ಲಿ ಹಾಡಿನ ರೂಪದ 27 ಸೂತ್ರಗಳಿವೆ. ಗ್ರಂಥದ ವಿಷಯ ವೇದಾಂತಕ್ಕೆ ಸಂಬಂಧಪಟ್ಟಿರುವುದರಿಂದಲೂ ಶ್ರುತಿ ಸ್ಮøತಿ ಪುರಾಣ ಇತಿಹಾಸ ಆಗಮ ಮುಂತಾದುವುಗಳ ಅನುವಾದಗಳಿರುವುದರಿಂದಲೂ ಈ ಸೂತ್ರಗಳಿಗೆ ಕವಿಯೇ ವ್ಯಾಖ್ಯಾನವನ್ನು ಬರೆದಿದ್ದಾನೆ. ಸೂತ್ರದಲ್ಲಿಯ ಅನುವಾದಗಳನ್ನು ವ್ಯಾಖ್ಯಾನದಲ್ಲಿ ವಿಸ್ತಾರವಾಗಿ ಪ್ರತಿಪಾದಿಸಿದ್ದಾನೆ. ಸೂತ್ರದಲ್ಲಿಲ್ಲದ ಶ್ರುತಿಯನ್ನು ವ್ಯಾಖ್ಯಾನದಲ್ಲಿ ವಿಸ್ತಾರವಾಗಿ ನಿರೂಪಿಸಿದ್ದಾನೆ.

	ನೀಲಕಂಠಾರಾಧ್ಯ ಘನಪಂಡಿತನೂ, ಶಾಸ್ತ್ರಜ್ಞನೂ ಆಗಿದ್ದಾನೆ. ಈತನ ಗ್ರಂಥದಲ್ಲಿನ ಇಪ್ಪತ್ತೇಳು ಸೂತ್ರಗಳು, ಇಪ್ಪತ್ತೇಳು ನಕ್ಷತ್ರಗಳಂತೆ ಶೈವ ವಿಶಿಷ್ಟಾದ್ವೈತ ತತ್ತ್ವಗಳಿಂದ ಕೂಡಿ ವಿರಾಜಮಾನವಾಗಿದೆ. ಈತ ತನ್ನ ಗ್ರಂಥವನ್ನು ಪರವಾದಿ ಗಜಾಂಕುಶ ತಾರಾವಳಿ ಎಂದು ಕರೆದಿರುವುದು ಉಚಿತವಾಗಿದೆ.							(ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ